ಅರೆತಲೆಬೇನೆ : ತಲೆನೋವುಗಳಲ್ಲೆಲ್ಲ ಬಲುನರಳಿಸುವ ತಲೆಯ ಒಂದು ಪಕ್ಕದಲ್ಲಿ
ಬರುವ ಬೇನೆ. ಮೇಲಿಂದ ಮೇಲೆ ಬರುವ ಸಿಡಿವಂಥ ತಲೆನೋವಿನೊಂದಿಗೆ ಕೆಲವೇಳೆ
ವಾಂತಿ, ತಲೆಸುತ್ತು, ದೃಷ್ಟಿಯ ವೈಚಿತ್ರ್ಯಗಳು ತೋರುವುದು ಬಹುಮಟ್ಟಿಗೆ ಸಾಮಾನ್ಯ.
ಚಂಚಲಮನದವರ ಮನೆತನಗಳಲ್ಲಿ ಹೆಚ್ಚು. ಆವರಣವೂ ಅನುವಾಗಿದ್ದರೆ, ಇದು ಸಿದ್ಧ.
ಓದಿದವರಲ್ಲೂ ಬುದ್ಧಿವಂತರಲ್ಲೂ ಸಾಮಾನ್ಯ. ಅದರಲ್ಲೂಮಾಡುವ ಎಲ್ಲ ಕೆಲಸಗಳಲ್ಲೂ
ಕಟ್ಟುನಿಟ್ಟಾಗಿರುವ ಹೊತ್ತಿ£ಲ್ಲೂ ಕಟ್ಟು ಪಾಡು ತೋರುವ ಜನಕ್ಕೆ ಇದು ಅಂಟಿಬಂದದ್ದು,
ಮೊಲ್ಲಾಗರದ (ಎಪಿಲೆಪ್ಸಿ) ರೋಗಿಗಳಲ್ಲೂ ಕಾಣಿಸಿಕೊಳ್ಳಬಹುದು.

ಅನೇಕ ವೇಳೆ ಒಗ್ಗದಿರುವಿಕೆಯೇ (ಅಲರ್ಜಿ) ಇದರ ಕಾರಣ. ಅಂದರೆ ಯಾವುದೋ
ವಸ್ತುಗಳು ಅವರಿಗೆ ಒಗ್ಗದಿರಬಹುದು. ಮಿದುಳಿನ ಹೊರಮೈಮೇಲಿರುವ ಧಮನಿಗಳಲ್ಲಿ
ಏನೋ ವ್ಯತ್ಯಾಸವಾಗುವುದು; ಅಜೀರ್ಣ, ಮಲಕಟ್ಟು, ಜೀವ ವಿಷ ರಕ್ತ, ಆಗಿಸುವ
ಮತ್ತಿತರ ಬೇನೆಗಳೊಂದಿಗೆ ಜೀವವಸ್ತುಕರಣದ (ಮೆಟಬಾಲಿಕ್) ಏರುಪೇರುಗಳಲ್ಲದೆ,
ಕಣ್ಣಿನ ಕುಂದುಗಳು ಈ ಬೇನೆವನ್ನು ಕೆರೆಳಿಸುತ್ತವೆ. ತಲೆನೋವು ಇಲ್ಲದಾಗ ಉಳಿದೆಲ್ಲ
ರೀತಿಗಳಲ್ಲೂ ರೋಗಿ ಆರೋಗ್ಯವಾಗಿಯೇ ಇರುವನು. ಎಳೆಯರಲ್ಲಿ ಬಂದರೆ ವಾಂತಿ
ಆಗುವುದರಿಂದ ಅಜೀರ್ಣವೆಂದು ತಪ್ಪು ತಿಳಿದುಕೊಳ್ಳುವಂತಾಗುವುದು. ಸಾಮಾನ್ಯವಾಗಿ
ನಿಜವಾದ ಅರೆತಲೆಬೇನೆ ಹರೆಯದಲ್ಲಿ, ಕೆಲವೇಳೆ ನಡುವಯಸ್ಸಿನಲ್ಲಿ, ತಲೆ ಹಾಕಿ ವಯಸ್ಸಾದಂತೆ
ಇಳಿದುಹೋಗುತ್ತದೆ.

ಇನ್ನೇನು ತಲೆನೋವು ಬರುತ್ತದೆ ಎನ್ನುವಂತೆ ತಲೆ ದಿಮ್ಮೆನ್ನುತ್ತದೆ. ಕೆಲವರು ಆಗ
ಎಂದೂ ಇರದಷ್ಟು ಚುರುಕಾಗಿ ಲವಲವಿಕೆಯಲ್ಲಿ ಇರುವರು. ರಕ್ತ ಒತ್ತಡ ಏರಿರುತ್ತ್ತದೆ.
ಸಾಮಾನ್ಯವಾಗಿ ಕಣ್ಣಿನ ಭಾಗದಿಂದ ಹುಟ್ಟುವ ಈ ತಲೆನೋವು ಹೆಚ್ಚಿದಾಗ ಬಿಳಿಚಿಕೊಂಡು
ಚಳಿಗುಟ್ಟುವರು. ಕೆಲವೇಳೆ ಅದೇ ಪಕ್ಕದ ತಲೆಯಲ್ಲೂ ಕೈ, ತುಟಿಗಳು, ನಾಲಗೆಗಳಲ್ಲೂ
ಚುಮುಗುಟ್ಟಿ ಜೋಮು ಹಿಡಿದಂತಿರುವುದು. ಬಲದ ಪಕ್ಕದಲ್ಲಿ ಹೀಗಾದರೆ ಮಾತೂ
ತೊಡರಬಹುದು. ಮಿನುಗುವ ಬೆಳಕೋ ಚುಕ್ಕೆಗಳೋ ಕಣ್ಣಿಗೆ ತೋರುತ್ತ ಕೊನೆಗೆ
ಮತ್ತೇನೂ ಕಾಣದಾಗಬಹುದು. ಪೂರ್ತಿ ಕಣ್ಣು ಹೀಗಾಗದು. ಬಾಯಲ್ಲಿ ಕಿಲುಬು ರುಚಿ
ತೋರುವುದು. ಈ ಮುನ್ಸೂಚಕ ಲಕ್ಷಣಗಳು ಕೆಲವರಲ್ಲಿ ಯಾವಾಗಲೂ ಕೆಲವರಲ್ಲಿ
ಅಪೂರ್ವವಾಗಿ ಕಾಣಿಸಿಕೊಳ್ಳುತ್ತದೆ.

ಈ ಲಕ್ಷಣಗಳೆಲ್ಲ 15-20 ಮಿನಿಟುಗಳಲ್ಲಿ ಇಳಿದುಹೋಗಿ ತಲೆಯ ಒಂದು ಪಕ್ಕದಲ್ಲಿ
(ಕಣ್ಣು ಮಂಜಾಗಿರುವುದರ ಎದುರು) ಕಣತಲೆಯಲೋ ಕಣ್ಣಿನ ಮೇಲೋ ಕೊರೆಯುವ
ಮೊಂಡು ನೋವಿರುತ್ತದೆ. ಬರುವ ಮೊದಲಲ್ಲಿ ತಲೆನೋವು ತಲೆಯ ಒಂದೇ ಪಕ್ಕಕ್ಕಿದ್ದು
ಹಾಗೇ ಉಳಿಯಬಹುದು. ಅಷ್ಟೇ ಸಾರಿ ಬೇರೆಡೆಗಳಿಗೂ ಹರಡಿ ತಲೆಯ ಪೂರಾ
ಹತ್ತಬಹುದು. ಬರುಬರುತ್ತ ನೋವೇರಿ ಇನ್ನಷ್ಟು ನರಳಿಸುತ್ತದೆ. ನೋವೇರಿದಾಗ ರೋಗಿಗೆ
ಸುಸ್ತಾಗಿ ಓಕರಿಕೆ, ವಾಂತಿ ಆಗುವುದು, ಬೇನೆ ಹಲವು ಬಾರಿ ಬೆಳಗಿನ ಜಾವಕ್ಕೇ
ಮೊದಲಾಗಿ, ತಾಸಿನಿಂದ ಹಿಡಿದು ಮೂರು ದಿವಸಗಳ ತನಕ ಇರಬಹುದು. ಇವನ್ನು
ಬಿಟ್ಟರೆ, ರೋಗಿ ಬೇಗನೆ ಪೂರಾ ಚೇತರಿಸಿಕೊಳ್ಳುವನು.
ದಣಿವು ಮೈ ಮತ್ತು ಮನದ ಒತ್ತಡ, ಚಿಂತೆ, ಉದ್ರೇಕ, ಗಲಾಟೆ, ಕೋರೈಸುವ
ಬೆಳಕು, ಎಷ್ಟು ಹೊತ್ತಾದರೂ ಹೊಟ್ಟೆಹಸಿದಿರುವಿಕೆ. ಇವು ತಲೆನೋವು ಬರಿಸುವ
ತತ್ಕಾಲದ ಮುಖ್ಯ ಕಾರಣಗಳು. ಬರಿಹೊಟ್ಟೆಯಲ್ಲಿ ಹೊಗೆಬತ್ತಿ ಸೇದಿಕೆ, ಮಿತಿಗೆಟ್ಟ
ಉಣಿಸು, ಮಲಕಟ್ಟು, ಚಲನಚಿತ್ರ ನೋಡುವುದು, ರೈಲು ಪಯಾಣವೇ ಮುಂತಾದವಿಂದಲೂ
ತಲೆನೋವು ಕೆರಳಬಹುದು; ನೋಟ ಸರಿಪಡಿಸುವ ಕನ್ನಡಕವನ್ನು ಹಾಕದೆ ಬಿಟ್ಟರೂ
ಬರಬಹುದು. ಅಂತೂ ಒಬ್ಬೊಬ್ಬರಲ್ಲಿ ಒಂದೊಂದು ತೆರನ ಕಾರಣ. ಹೆಂಗಸರಲ್ಲಿ
ಮುಟ್ಟಿಗೆ ಮುನ್ನ, ಇಲ್ಲವೇ ಮುಟ್ಟಾದಾಗ ಸಾಮಾನ್ಯ. ಕೆಲವೇಳೆ ಮುಟ್ಟು ನಿಂತಮೇಲೆ
(ಮೆನೋಪಾಸ್) ಹೆಚ್ಚಾಗುತ್ತದೆ.

ರೋಗದ ಕಾರಣಗಳನ್ನು ತಡೆಯುವುದೇ ನಿವಾರಣ ಕ್ರಮ. ವಿರಾಮ, ಕತ್ತಲುಗಳಿಂದ
ತುಸು ಇಳಿಯುತ್ತದೆ. ಲಘುನಿದ್ದೆಯಿಂದ ಎಷ್ಟೋ ಮೇಲಾಗುತ್ತದೆ ರಕ್ತನಾಳಗಳ
ಗೋಡೆಗಲಲ್ಲಿನ ನಯ ಸ್ನಾಯುಗಳನ್ನು, ಕುಗ್ಗಿಸಿ ನಾಡಿ ಬಡಿವುದನ್ನು ತಗ್ಗಿಸುವ ಎರ್ಗಟ್
ಮದ್ದಿನ ಉತ್ಪನ್ನ ವಾದ ಎರ್ಗಟಮೀನನ್ನು (ಫಿಮರ್ಜಿನ್, ಕೇಫರ್ಗಟ್) ಕೊಡುವುದೇ
ಅರೆತಲೆಬೇನೆಗೆ ಬಲು ಚೆನ್ನಾಗಿ ಹಿಡಿವ ಚಿಕಿತ್ಸೆ. ನೋವು ಕಂಡ ಎಳಸಿನಲ್ಲೇ ತೆಗೆದುಕೊಂಡರೆ
ಬರದಂತೆ ತಡೆಯಬಹುದು.
(ಎಸ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ